ಟೆರೆನ್ಸ್
ಕ್ರಿ. ಪೂ. 195 (185)-159. ಈ ಹೆಸರಿನಿಂದ ಪ್ರಖ್ಯಾತನಾಗಿರುವ ಪ್ರಾಚೀನ ರೋಮನ್ ಹರ್ಷನಾಟಕಕಾರನ ಪೂರ್ಣ ನಾಮಧೇಯ ಪಬ್ಲಿಯಸ್ ಟೆರೆನ್ಷಿಯಸ್ ಆಫರ್. ಈತ ಹುಟ್ಟಿದ್ದು ರೋಮಿನ ವೈರಿಯಾದ ಕಾರ್ತೇಜಿನಲ್ಲಿ. ರೋಮನ್ ಸೆನೆಟ್ಟಿನ ಸದಸ್ಯರಲ್ಲೊಬ್ಬನಾದ ಟೆರೆನ್ಷಿಯಸ್ ಲ್ಯೂಕನಸ್ ಈತನನ್ನು ಗುಲಾಮನನ್ನಾಗಿ ಕಾರ್ತೇಜಿನಿಂದ ಹಿಡಿದು ತಂದ; ಯುದ್ಧ ಕೈದಿಯಂತೆಯೊ ಕೊಂಡುಕೊಂಡೂ ನಿಜಾಂಶ ಗೊತ್ತಿಲ್ಲ. ಟೆರೆನ್ಸ್ ತನ್ನ ಮೈಕಟ್ಟು ಬುದ್ಧಿಶಕ್ತಿ ಗುಣಲಕ್ಷಣಗಳಿಂದ ಯಜಮಾನನ ಪ್ರೀತಿ ಗೌರವವನ್ನು ಸಂಪಾದಿಸಿ ಅವನ ಪೋಷಣೆಯಲ್ಲಿ ಉತ್ತಮ ವಿದ್ಯಾಭ್ಯಾಸವನ್ನೂ ಕಾವ್ಯಶಕ್ತಿಯನ್ನೂ ಗಳಿಸಿಕೊಂಡ. ಅಷ್ಟೇ ಅಲ್ಲದೆ ಬೇಬ ದಾಸ್ಯವಿಮೋಚನೆಯನ್ನೂ ಪಡೆದ. ಉಚ್ಚವರ್ಗದವರ ಸ್ನೇಹಸೌಹರ್ದವೂ ಒದಗಿಬಂದು, ಸುಸಂಸ್ಕøತ ಜನರ ಗೋಷ್ಠಿಗಳಲ್ಲಿ ಭಾಗವಹಿಸುವ ಧಾರಾಳ ಅವಕಾಶ ಇವನದಾಯಿತು. ಸಿಪಿಯೊ, ಲೀಲಿಯಸ್, ಸಿಸಿಲಿಯಸ್ ಮೊದಲಾದವರ ಗೆಳೆತನ ಇವನಿಗಿತ್ತು ಎಂದಮೇಲೆ ಇವನ ಸ್ಥಾನ ಹಿರಿಮೆಯುಳ್ಳದ್ದಾಗಿತ್ತು ಎಂದು ಬೇರ ಹೇಳಬೇಕಾಗಿಲ್ಲ. ಕ್ರಿ..ಪೂ. 166 ರಲ್ಲಿ ಟೆರೆನ್ಸನ ಪ್ರಥಮ ರೂಪಕ ಪ್ರದರ್ಶನಕ್ಕೆ ಬಂತು. ಪ್ರದರ್ಶನಕ್ಕೆ ಮುಂಚೆ ಕವಿ ಅದನ್ನು ಸಿಸಿಲಿಯಸ್ಸನ ಮುಂದೆ ಓದಿದಂತೆಯೂ ಆತ ಮೆಚ್ಚಿ ಶ್ಲಾಘಿಸಿದಂತೆಯೂ ಒಂದು ದಂತಕಥೆಯಿದೆ. ಆದರೆ ಸಿಸಿಲಿಯಸ್ 168 ರಲ್ಲಿಯೇ ಗತಿಸಿದನೆಂದು ರುಜುವಾತಾಗಿರುವುದರಿಂದ ಈ ಕಥೆ ಬರಿ ಕಟ್ಟುಕಥೆಯೊ ಏನೊ. 165ರಲ್ಲಿ ಒಂದು, 163ರಲ್ಲಿ ಒಂದು, 161ರಲ್ಲಿ ಎರಡು, 160ರಲ್ಲಿ ಒಂದು-ಹೀಗೆ ಒಟ್ಟು ಆರು ವರ್ಷನಾಟಕಗಳು ಟೆರೆನ್ಸನ ಕೃತಿಚಕ್ರ. ಈ ಕೆಲಸ ಮುಗಿದ ಕೂಡಲೆ ಈತ ತನಗೆ ಬಲು ಇಷ್ಟವಾಗಿದ್ದ ಗ್ರೀಸಿಗೆ ಹೋದ. ಆ ದೇಶದ ಪ್ರತ್ಯಕ್ಷ ಪರಿಚಯದಿಂದ ಅರಿವನ್ನು ಖಚಿತಗೊಳಸಿಕೊಳ್ಳುವುದೂ ಹೆಚ್ಚಿಸಿಕೊಳ್ಳುವುದೂ ಇವನ ಉದ್ದೇಶವಾಗಿರಬೇಕು. ಗ್ರಂಥಚೌರ್ಯದ ಆಪಾದನೆಯಿಂದ ತಲೆ ತಪ್ಪಿಸಿಕೊಳ್ಳುವುದೇ ಈತನ ಬಯಕೆಯಾಗಿತ್ತೆಂದು ಕುಹಕಿಗಳು ಚಾಡಿ ನುಡಿದರು. ಅದು ಹೇಗಾದರೂ ಇರಲಿ, ಟೆರೆನ್ಸ ಮತ್ತೆ ರೋಮಿಗೆ ಹಿಂತಿರುಗುವಂತಿಲ್ಲ. ಮಧ್ಯದಲ್ಲೇ ಕಡಲ ಪಾಲದನೊ ಆರ್ಕೆಡಿಯದ ಸ್ಟಿಮ್ಫಲಸ್‍ನಲ್ಲಿ ಸತ್ತನೊ, ಹಡಗಿನ ಅಪಘಾತದಲ್ಲಿ ಇತ್ತಾಪಾರವನ್ನು ಕಳೆದುಕೊಂಡು ಲ್ಯೂಕೇಡಿಯವನ್ನು ಕಷ್ಟದಿಂದ ತಲಪಿ. ಶೋಕವಶನಾಗಿ ಅಲ್ಲಿ ಅಸುನೀಗಿದನೋ ತೀರ್ಮಾನಿಸುವಂತಿಲ್ಲ. ಒಂದು ವರದಿಯಂತೆ ದೊಡ್ಡಮನುಷ್ಯರ ಸಹವಾಸ ಇವನಿಗೆ ಬಡತನವನ್ನೂ ಕೊರಗನ್ನೂ ತಂದುಕೊಟ್ಟಿತು ಎಂದು ಸಾರಿದರೆ, ಇನ್ನೊಂದು ವರದಿ ಇಪ್ಪತ್ತು ಎಕರೆ ತೋಟಗಳನ್ನು ದತ್ತಿಬಡುವುದೇ ಅಲ್ಲದೆ ತನ್ನ ಮಗಳಿಗೆ ಒಬ್ಬ ಕುಲೀನ ಶ್ರೀಮಂತನನ್ನು ಕೈಹಿಡಿಯಲು ಬರುವಷ್ಟು ಬಳುವಳಿ ಕೊಟ್ಟನೆಂದು ಘೋಷಿಸುತ್ತದೆ. ಪುರಾತನ ಸಾಹಿತಿಗಳ ಜೀವನಚರಿತ್ರೆ ಸಾಮಾನ್ಯವಾಗಿ ಹೀಗೆ ಸಮಸ್ಯೆಗಳಿಂದ ಕೂಡಿದ್ದು.

ಆಂಡ್ರಿಯ (ಆಂಡ್ರಾಸಿನ ಮಹಿಳೆ) : ಆಥೆನ್ಸಿನ ಯುವಕ ಶ್ರೀಮಂತ ಪಾಂಫಿಲಸ್ ಆಂಡ್ರಾಸಿನ ವೇಶ್ಯೆಯೊಬ್ಬಳ ತಂಗಿಯಂತಿದ್ದ ಗ್ಲಿಸೆರಿಯಮಳೊಡನೆ ಅಂಗಸಂಗ ಬೆಳೆಸುತ್ತಾನೆ. ಅವನ ತಂದೆ ಸೀಮೊ ತನ್ನ ಮಿತ್ರ ಕ್ರೆಮೀಸನ ಮಗಳನ್ನೂ ಸೊಸೆ ಮಾಡಿಕೊಳ್ಳಲು ಇಷ್ಟಪಟ್ಟಿದ್ದಾನೆ. ಪಾಂಫಿಲಸ್ಸನ ಗುಟ್ಟು ಕ್ರೆಮೀಸನಿಗೆ ಗೊತ್ತಾಗುತ್ತದೆ; ಮಗಳನ್ನು ಕೊಡಲು ಅವನು ಒಪ್ಪುವುದಿಲ್ಲ. ಸೀಮೊ ಸಿದ್ಧತೆಗಳನ್ನು ಮುಂದುವರಿಸುತ್ತಾನೆ. ಪಾಂಫಿಲಸ್ ತನ್ನ ಗುಲಾಮ ಡಾವುಸನಿಂದ ಎಲ್ಲ ವಿಚಾರವನ್ನೂ ತಿಳಿಯುತ್ತಾನೆ; ಹಾಗೂ ತಂದೆಗೆ ವೆಧೇಯಂತೆ ನಟಿಸುತ್ತಾನೆ. ಕಾಲಾನುಕಾಲದಲ್ಲಿ ಗ್ಲಿಸೆರಿಯಂ ಗಂಡು ಮಗು ಹೆರುತ್ತಾಳೆ. ಕ್ರೆಮೀಸ್ ಸೀಮೊಗೆ ನಕಾರ ಕಳಿಸುತ್ತಾನೆ. ಗ್ಲಿಸೆರಿಯಂ ನಿಜಕ್ಕೂ ಕ್ರಮೀಸನ ಕುಮಾರಿ, ಹಡಗು ಮುಳುಗೆ ಅಂಡ್ರಾಸಿಗೆ ತರಲ್ಪಟ್ಟಿದ್ದಳು-ಎಂಬ ಸತ್ಯಾಂಶ ಆಗ ತಿಳಿಯುತ್ತದೆ. ಮಂಗಳ ವಿವಾಹದಿಂದ ನಾಟಕ ಮುಗಿಯುತ್ತದೆ.

ಹೆಕೈರ (ಅತ್ತೆ) : ಈ ನಾಟಕ ಕ್ರಿ. ಪೂ. 165 ರಲ್ಲಿ ಪ್ರದರ್ಶನಕ್ಕೆ ಬಂದಾಗ ನೋಟಕರ ಗಮನವೆಲ್ಲ ಮಗ್ಗುಲಲ್ಲೇ ಹಗ್ಗದ ಮೇಲೆ ಕಸರತ್ತು ಮಾಡುವವನೊಬ್ಬನ ಕಡೆಗೇ ಹೋಯಿತಾಗಿ ನಾಟಕವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು. ಪುನಃ 160 ರಲ್ಲಿ ಅದು ಜಯಪ್ರದವಾಗಿ ಅಭಿನಯಿಸಲ್ಪಟ್ಟಿತು. ಪಾಮಫಿಲಸ್ ಎಂಬ ತರುಣನಿಗೂ ವೇಶೈ ಬಾಕಿಸ್ಸಿಗೂ ಗಂಟು. ಅವನ ತಂದೆ ಛೀಮಾರಿ ಮಾಡಿ ಬಲಾತ್ಕರಿಸಿ ಮದುವೆ ನಿಲ್ಲುವಂತೆ ಮಾಡುತ್ತಾನೆ. ಅನಂತರ ವ್ಯಾಪರಕ್ಕೆಂದು ದೂರದ ಇಯಾಂಬ್ರಸ್ಸಿಗೆ ಪಾಂಫಿಲಸ ಹೋಗಬೇಕಾಗುತ್ತದೆ. ತರುವಾಯ ಅವನ ಹೆಂಡತಿ ಅತ್ತೆಯ ಮನೆಯನ್ನು ಬಿಟ್ಟು ತವರಿಗೆ ಹೋಗಿ, ಅಲ್ಲಿ ಕೆಲವೇ ತಿಂಗಳಲ್ಲಿ ಬಾಣಂತಿಯಾಗುತ್ತಾಳೆ, ದಿಟವಾಗಿ ಅವಳು ಮದುವೆಗೆ ಮುನ್ನವೇ ಒಬ್ಬ ಪುರುಷನೊಡನೆ ರಹಸ್ಯಪ್ರಣಯ ಹೊಂದಿದ್ದಳು; ಅವಳದ್ದಾದ ಒಂದು ಉಂಗುರ ಅವನ ಕೈಗೆ ಬಂದು ಈಗ ಬಾಕಿಸ್ಸಳ ಬಳಿ ಇದೆ. ಉಂಗುರದ ಮೂಲಕವೂ ಬಾಕಿಸ್ಸಳ ಸತ್ಯನಿಷ್ಠೆಯಿಂದಲೂ ಪಾಂಫಿಲಸ್ಸೇ ಆ ಪುರುಷ ಎಂದು ದೃಢವಾಗುತ್ತದೆ. ಸಮಾಧಾನ ಸಂತೋಷದಿಂದ ನಾಟಕ ಮುಗಿಯುತ್ತದೆ.

ಹ್ಯೋಟನ್ ಟೆಮೋರುಮೆನಾಸ್ (ಆತ್ಮ ಚಿತ್ರಹಿಂಸಕ) : ಪಶ್ಚತ್ತಾಪ ಪಟ್ಟು ತನ್ನನ್ನು ತಾನೇ ಚಿತ್ರಹಿಂಸೆಗೆ ಗುರಿಮಾಡಿಕೊಳ್ಳವಾತ ಮೆನೆಡೀಮಸ್ ಎಂಬ ಅಟಿಕದವ. ಮಗ ಕ್ಲೀನಿಯ ಒಬ್ಬ ಬಡ ಹುಡುಗಿ ಆಂಟಿಫಿಲ ಎಂಬವಳನ್ನು ಪ್ರೀತಿಸುತ್ತಿದ್ದಾನೆಂದು ತಿಳಿದು, ರೋಷಗೊಂಡ ತಂದೆ ಅವನ್ನು ದೇಶದಿಂದಾಚೆ ದೂಡುತ್ತಾನೆ. ನೆರೆಮನೆಯ ಸ್ನೇಹಿತನೊಬ್ಬ ಮೆನೆಡೀಮಸನನ್ನು ಖಂಡಿಸಿ ತಂದೆಯ ಕರ್ತವ್ಯವೇನಿಂದು ಉಪದೇಶ ಹೇಳಿ ಅವನಲ್ಲಿ ಪಶ್ಚಾತ್ತಾಪ ಮೂಡುವಂತೆ ಮಾಡುತ್ತಾನೆ. ಆ ಸ್ನೇಹಿತನ ಹೆಸರು ಕ್ರೆಮೀಸ್. ಅವನ ಮಗ ಕ್ಲೀಟಿಫೊ ತಂದೆಗೆ ತಿಳಿಯದಂತೆ ವೇಶ್ಯೆ ಬಾಕಿಸಳಿಗೆ ಹಣ ಕಳಿಸುತ್ತಿರುತ್ತಾನಿ. ಕ್ಲೀಟೆಫೊನ ಗೆಳೆಯ ಬಾಕಿಸ್ ಅಂಟಿಫಿಲ ಎಲ್ಲರೂ ಕ್ರೆಮೀಸನ ಮನೆಯನ್ನು ಸೇರುತ್ತಾರೆ. ವಂಚನೆ ರಟ್ಟಾಗುತ್ತದೆ. ಕ್ರೆಮೀಸ್ ರೇಗೆಬಿದ್ದು ತಾನಿತ್ತ ಉಪದೇಶವನ್ನು ಪೂರ್ತಿ ಮರೆತು, ಮಗನಿಗೆ ಎಲ್ಲ ಹಕ್ಕುನ್ನೂ ರದ್ದುಗೊಳಿಸುತ್ತಾನೆ. ಅವನ ಪತ್ನಿ ನಡುವೆ ಪ್ರವೇಶಿಸಿ ಸಮಜಾಯಿಸಿ ಮಾಡುತ್ತಾಳೆ. ಈ ಮಧ್ಯೆ ಅಂಟಿಫಿಲ ಕ್ರೇಮೀಸನ ಮಗಳೆಂದು ಗೊತ್ತಾಗುತ್ತದೆ. ಶಾಂತಿಸೌಹಾರ್ದ ಎರಡು ಕುಟುಂಬದಲ್ಲೂ ಬೇರುಬಿಡುತ್ತದೆ.

ಖೋಜಾ (ಯೂನಕಸ್) : ಆಥೇನ್ಸಿನ ಯುವಕ ಫೀಡ್ರಿಯನಿಗೆ ವೇಶ್ಯೆ ಥಾಯಿಸ್ಸಳ ಮೇಲೆ ಒಲವು. ಥ್ರಾಸೊ ಎಂಬೊಬ್ಬ ಜಂಬದ ದಳಪತಿಗೂ ಅವಳ ಮೇಲೆ ಕಣ್ಣು. ಅವಳಿಗೋಸ್ಕರ ರ್ಹೋಡ್ಸಿನಿಂದ ತರುಣ ಗುಲಾಮಿಯೊಬ್ಬಳನ್ನು ಅವನು ತಂದಿದ್ದಾನೆ. ಆ ಹೆಣ್ಣು ಆಥೆನ್ಸಿನವಳೆಂದು ಥಾಯಿಸ್ಸಿಗೆ ಗೊತ್ತಿಲ್ಲ, ಫೀಡ್ರಿಯನನ್ನು ಒಪ್ಪಿಸಿ ಅವಳು ದಳಪತಿಗೆ ಒಲಿದಂತೆ ನಟಿಸಿ ಹುಡುಗಿಯನ್ನು ಪಡೆದುಕೊಳ್ಳುತ್ತಾಳೆ. ದಾರಿಯಲ್ಲಿ ಬರುತ್ತಿದ್ದ ಫೀಡ್ರಿಯನ ತಮ್ಮ ಕೀರಿಯ ಅವಳ ಮೇಲೆ ಮೋಹಗೊಳ್ಳುತ್ತಾನೆ. ಅಣ್ಣ ಥಾಯಿಸ್ಸಿಗೆಂದು ಕೊಂಡು ತಂದಿರುವ ಒಬ್ಬ ಖೋಜಾನೊಡನೆ ವೇಷ ಬದಲಾಯಿಸಿಕೊಂಡು ಕೀರಿಯ ಥಾಯಿಸಳ ಅಂತಃಪುರವನ್ನು ಹೋಗುತ್ತಾನೆ. ಹಾಗು ಹುಡುಗಿಯೊಂದಿಗೆ ಸಂಗಬೆಳೆಸುತ್ತಾನೆ. ಅವಳ ರಹಸ್ಯ ಹೊರಬಂದ ಅನಂತರ ಇಬ್ಬರಿಗೂ ಮದುವೆ ನಿಶ್ಚಿತವಾಗುತ್ತದೆ. ಥಾಯಿಸ್ಸಳಿಂದ ತಿರಸ್ಕøತನಾದ ಥ್ರಾಸೊ ಹುಡುಗಿಯನ್ನು ಹೊತ್ತುಕೊಂಡು ಹೋಗುವುದಕ್ಕೆ ಪ್ರಯತ್ನಿಸಿ ಸೋಲುತ್ತಾನೆ.

ಫಾರ್ಮಿಯೊ (ಪರಾನ್ನಜೀವಿ) : ಆಥೆನ್ಸಿನ ಯುವಕ ಆಂಟಿಫೊ ತಂದೆ ಡೆಮಿಫೊನ ಗೈರುಹಾಜರಿಯಲ್ಲಿ ಒಬ್ಬ ಏಕಾಕಿ ಹುಡುಗಿಯನ್ನು ಕಂಡು ಮೋಹಪರವಶನಾಗುತ್ತಾನೆ. ಅವನಿಗೊಬ್ಬ ಸಹಾಯಕ ಫಾರ್ಮಿಯೊ ಸಿಕ್ಕುತ್ತಾನೆ. ಕುಶಲಮತಿಯಾದ ಫಾರ್ಮಿಯೊ ಹಳೆಯ ಶಾಸನವೊಂದನ್ನು ತಡಕಿ ತೆಗೆದು. ಅದರಂತೆ ಅನಾಥರನ್ನು ಸಂಬಂಧಿಗಳು ಮದುವೆ ಮಾಡಿಕೊಳ್ಳಬಹುದಾದ ರಹದಾರಿ ಪಡೆದು, ಆಂಟಿಫೊನ ಅಭಿಲಾಷೆ ನೆವೇರುವಂತೆ ಏರ್ಪಡಿಸುತ್ತಾನೆ. ಆಂಟಿಫೊನ ದಾಯಾದಿ ಫೀಡ್ರಿಯನಿಗೆ ಗಾಯಕಿಯೊಬ್ಬಳ ಮೇಲೆ ಮನಸ್ಸು ಆದರೆ ಅವಳನ್ನು ಕೊಂಡುಕೊಳ್ಳಲು ಹಣವಿಲ್ಲ, ಅವನ ತಂದೆ ಕ್ರೆಮೀಸನೂ ಡೆಮಿಫೊವೊ ಹಿಂತಿರುಗುತ್ತಾರೆ. ಮಗನ ಮೇಲೆ ಡೆಮಿಫೊಗೆ ತುಂಬ ಕೋಪ. ಫಾರ್ಮಿಯೊ ದುಡ್ಡು ಕೊಟ್ಟರೆ ಹುಡುಗಿಯನ್ನು ತಾನೇ ಮದುವೆಯಾಗುವಂತೆ ಹೇಳಿ ಕೈಗೆ ಬಂದ ದ್ರವ್ಯವನ್ನು ಫೀಡ್ರಯಾವಿಗೆ ಕೊಡುತ್ತಾನೆ; ಅವನಿಗೆ ಗಾಯಕಿ ವಶವಾಗುತ್ತಾಳೆ. ಈ ಮಧ್ಯೆ ಆಂಟಿಫೊ ಕೈಹಿಡಿದ ಹುಡುಗಿ ಕ್ರೆಮೀಸನ ಅಕ್ರಮಪುತ್ರಿಯೆಂದು ಗೊತ್ತಾಗುತ್ತದೆ. ಆಂಟಿಫೊಗೆ ಮನ್ನಣೆ ದೊರಕುತ್ತದೆ. ಫಾರ್ಮಿಯೊಳಗೆ ಇತ್ತ ಹಣವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಕ್ರೆಮೀಸನ ವ್ಯಭಿಚಾರ ಅವನ ಹೆಂಡತಿಗೆ ತಿಳಿದು ಸ್ವಲ್ಪ ರಂಪ ಏಳುತ್ತದೆ. ನಾಟಕದ ಕೊನೆಗೆ ಸಮಾಧಾನ, ಒಡಂಬಡಿಕೆ ಏರ್ಪಡುತ್ತದೆ.

ಅಡೆಲ್ಫೊ (ಸಹೋದರರು) : ಡೀಮಿಯ ಎಂಬಾತನಿಗೆ ಇಬ್ಬರು ಮಕ್ಕಳು ಕ್ಟೀಸಿಫೊವನ್ನು ತಾನೇ ತನ್ನ ಗ್ರಾಮಾಂತರದಲ್ಲಿ ಪೋಷಿಸುತ್ತ, ಈಸ್ಕಿನೆಸನನ್ನು ತನ್ನ ಸಹೋದರ ಮಿಕಿಯೊ ಪಟ್ಟಣದಲ್ಲಿ ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಿದ್ದಾನೆ. ಡೀಮಿಯ ಲೋಭಿ, ಕಠಿಣಮನಸ್ಕ ; ಮೀಕಿಯೊ ಉದಾರ ಹೃದಯಿ, ಧಾರಾಳಿ, ಈಸ್ಕಿನಸ್ ಬಡವಿಯೊಬ್ಬಳೊಂದಿಗೆ ಸಂಗ ಬೆಳೆಸಿ ಅವಳನ್ನು ಮದುವೆಯಾಗಲು ತವಕಿಸುತ್ತಾನೆ. ಕ್ಟೀಸಿಫೊಗೆ ಗಾಯಕಿಯೊಬ್ಬಳ ಮೇಲೆ ಒಲವು. ಅವನಿಗೆ ನೆರವಾಗಲು ಈಸ್ಕಿನಸ್ ಅವಳನ್ನು ಮಾಲೀಕನಿಂದ ಅಪಹರಿಸಿ ಮೀಕಿಯೊ ಮನೆಗೆ ಕರೆತರುತ್ತಾನೆ, ಮೀಕಿಯೊ ನಿಜವನ್ನು ಅರಿತು ಅವನನ್ನು ಕ್ಷಮಿಸುತ್ತಾನೆ. ಕ್ಟೀಸಿಫೊವಿನ ಗುಪ್ತಪ್ರಣಯದಿಂದ ಕುಪಿತನಾದ ಡೀಮಿಯ ತನ್ನ ಸಿಡುಕು ಸ್ವಾಭಾವಕ್ಕಾಗಿ ಮನನೊಂದು, ಔದಾರ್ಯಕ್ಕೆ ತಿರುಗಿಸಿ ಎಲ್ಲರನ್ನು ಮನ್ನಿಸಿ, ಅತಿವಾಂಛಲ್ಯದಿಂದ ಮೀಕಿಯೊವಿಗೂ ವಯಸ್ಕಳೊಬ್ಬಳಿಗೂ ಪಾಣಿಗ್ರಹಣ ನಡೆಸುತ್ತಾನೆ. ಅಷ್ಟಕ್ಕೇ ನಿಲ್ಲದೆ ಮೀಕಿಯೊವಿನ ಗುಲಾಮನಿಗೆ ಬಂಧನ ಬಿಡಿಸಿ, ಸ್ವತಂತ್ರ ಜೀವನಕ್ಕೆ ಸಹಾಯ ಕೊಡಿಸುತ್ತಾನೆ.
ಟೆರನ್ಸ್‍ಗೆ ಸ್ವಂತಿಕೆ ತೀರ ಊನವೆಂಬ ದೋಷಾರೋಪಣೆ ಹಿಂದಿನಿಂದ ನಡೆದು ಬಂದಿದೆ. ಕಥಾವಸ್ತುವಿನ ವಿಚಾರದಲ್ಲಿ ಅದು ಸಲ್ಲುತ್ತದೆ. ಕ್ರಿ. ಪೂ. ಸುಮಾರು 342-292ರಲ್ಲಿದ್ದ ಪ್ರಾಚೀನ ಗ್ರೀಕರ ಶ್ರೇಷ್ಠ ಹರ್ಷನಾಟಕಕಾರ ಮಿನಾಂಡರ ಟೆರೆನ್ಸ್‍ಗೆ ಮುಖ್ಯ ಆಧಾರ. ಆರರಲ್ಲಿ ನಾಲ್ಕು ಮಿನಾಂಡರನ ಅದೇ ಹೆಸರಿನ ನಾಟಕಗಳ ಅನಿರ್ಬಂಧ ಅನುವಾದವಾಗಿವೆ. ಮಿಕ್ಕ ಎರಡೂ ಇತರರಿಂದ ಎರವು ತೆಗೆದುಕೊಂಡವು. ಗ್ರೀಕರ ಹೊಸ ಹರ್ಷನಾಟಕಕ್ಕೆ (ನ್ಯೂ ಕಾಮಿಡಿ) ಮಿನಾಂಡರ್ ಅತ್ಯುತ್ತಮ ಪ್ರತಿನಿಧಿ. ಅದರ ಮುಖ್ಯಾಂಗ ಇವು: ಪ್ರೇಮದ ಹಗರಣ, ತರುಣತರುಣಿಯರ ರಹಸ್ಯಪ್ರಣಯ, ಮಕ್ಕಳ ತೊರೆತ, ಯಾವುದೊ ಕುರುಹಿನ ಮೂಲಕ ಸತ್ಯಾಂಶದ ಪ್ರಕಟಣೆ, ಕೊನೆಯ ಸಮಜಾಯಿಷಿ, ಅದರಲ್ಲಿ ಬರುವ ಪಾತ್ರಗಳಲ್ಲಿ ಸಿಡುಕುಮುಖದ ತಂದೆ, ಚತುರಮತಿಯಾದ ಗುಲಾಮ ಒಳ್ಳೆಯ ಉಪಕಾರಿ ವೇಶ್ಯ ಇವರು ಪುನಃಪುನಃ ಕಂಡುಬಂದರೂ ನಾಟಕಗಳ ವೈವಿಧ್ಯಕ್ಕೆ ಕೊರೆಯಿಲ್ಲ. ಟೆರೆನ್ಸನ ಅನುವಾದಗಳಿಗೂ ಅದೇ ಬಗೆಯ ಲಕ್ಷಣ.

ಗ್ರೀಕ್ ಹರ್ಷನಾಟಕದ ಅನುವಾದವನ್ನು ಪ್ರಾರಂಭಿಸದವ ಟೆರೆನ್ಸ್ ಅಲ್ಲ. ಪ್ಲಾಟಸ್. ಗ್ರೀಕರ ಬದುಕು, ನಡೆನುಡಿ, ಆಶೋತ್ತರ, ಸಂಪ್ರದಾಯಗಳನ್ನೇ ಪ್ರಸ್ತಾಪಿಸಿದರೂ ಪ್ಲಾಟಸ್ ತನ್ನ ಕಾಲದ ಜನಸಾಮಾನ್ಯರ ಸ್ಥಿತಿಗತಿಯ ಅಂಶಗಳನ್ನೂ ತಂದು ಸೇರಿಸಿ, ನಾಟಕ ನೋಟಕರಿಗೆ ಹಿಡಿಸುವಂತೆ ಮಾಡಿದ. ಅವನಲ್ಲಿ ಅತಿರೇಕ ವಿಕಟಾನುಕರಣ ಉತ್ಪ್ರೇಕ್ಷೆ ಗೇಲಿ ಮುಂತಾದವು ಹೆಚ್ಚು. ಅವನಿಗೂ ಟೆರೆನ್ಸ್‍ಗೂ ಕಾಲದ ಅಂತರ ಸುಮಾರು ಅರವತ್ತು ವರ್ಷ ಅಷ್ಟರಲ್ಲಿ ಜನರ ಧೋರಣೆ ವ್ಯತ್ಯಾಸವಾಗಿತ್ತು. ನಾಟಕಕ್ಕಿಂತ ನಕಲಿ. ಅಚ್ಚು ಕಟ್ಟಾದ ಸಂವಿಧಾನಕ್ಕಿಂತ ಆವೇಶದ ದೃಶ್ಯಾವಾಳಿ, ಗಂಭೀರ ಭಾಷೆಗಿಂತ ಅಶ್ಲೀಲ ಸಂಭಾಷಣೆ ಪ್ರೇಕ್ಷಕರಿಗೆ ಹಿತವೆನ್ನಿಸಿತ್ತು. ಪ್ರತಿಭಾವಂತ ಕವಿಗಳು ಆಡು ನಾಟಕವನ್ನು ತ್ಯಜಿಸಿ ಓದುನಾಟಕಗಳನ್ನು ಬರೆಯತೊಡಗಿದ್ದರು. ಆದ್ದರಿಂದ ಟೆರೆನ್ಸ್ ಜನಪ್ರಿಯ ಕವಿಯಾಗಲಿಲ್ಲ.

ಮಿನಾಂಡರನ ನೈಜ ಉತ್ತರಾಧಿಕಾರಿಯಾಗುವ ಹಕ್ಕೂ ಜವಾಬ್ದಾರಿಯೂ ತನ್ನವೆಂದು ಟೆರೆನ್ಸ್ ಭಾವಿಸಿಕೊಂಡಂತೆ ಕಾಣುತ್ತದೆ. ಗ್ರೀಕರ ಸಂಸ್ಕ್ರತಿಯನ್ನೂ ಬಾಳಿನ ವಿಧಾನವನ್ನೂ ಯಥಾರ್ಥವಾಗಿ ಚಿತ್ರಿಸುವುದೇ ಅವನ ಹಂಬಲಿಕೆಯಾಯಿತು. ಗ್ರೀಕ್ ಮಾದರಿಗಳನ್ನು ಕಂಡು ಅವನಿಗೆ ಪರಮಶ್ರದ್ಧೆ. ಹಿಂದಣ ಕಾಲದ ರೋಮನರ ಅಥವಾ ಸಮಕಾಲೀನ ರೋಮನರ ಆಚಾರವ್ಯವಹಾರಗಳಿಗೆ ತನ್ನ ಯಾವ ಹೇಳಿಕೆಯೂ ಅನ್ವಯಿಸಕೂಡದೆಂದೇ ಅವನ ಸಂಕಲ್ಪ. ಪ್ರತಿಯೊಂದು ರೂಪಕದಲ್ಲೂ ಆರಂಭದ ಸನ್ನಿವೇಶವನ್ನು ಸ್ಪಷ್ಟವಾಗಿ ವಿವರಿಸಿ. ಮುಂದಣ ಘಟನಾವಳಿ ಮನುಷ್ಯಸಹಜವಾದ ಸ್ವಾಭಾವಿಕತೆಯಂತೆಯೂ ನೈಸರ್ಗಿಕ ಆಶೆ ಪ್ರತ್ಯಾಶೆಯ ಪ್ರಚೋದನೆಯಂತೆಯೂ ಜರುಗುವಂತೆ ನಿರ್ಮಾಪಿಸುತ್ತಾನೆ. ಅವನ ಪಾತ್ರಗಳಾವುವೂ ಹೆಬ್ಬಯಕೆಯಿಂದ ಗುಡುಗಾಡುವ ಧೀರ ವೀರ ಸಾಹಸಿಗಳಲ್ಲ. ಮಾನವ ಸಾಮಾನ್ಯ ರೀತಿನೀತಿಯ ಸಾಧಾರಣ ವ್ಯಕ್ತಿಗಳು. ವಾಸ್ತವ ಜೀವನದಿಂದ ಎತ್ತಿಕೊಂಡವುಗಳಲ್ಲದಿದ್ದರೂ ಮನುಷ್ಯತ್ವದಿಂದ ಕೂಡಿದ ನಯವಿನಯ ಪೂರಿತ ವ್ಯಕ್ತಿಗಳು. ಪ್ರಪಂಚದ ಯಾವೆಡೆಯಲ್ಲಾದರೂ ಕಂಡುಬರಬಹುದಾದ ಪೌರರೂ ಪೌರಕುಟುಂಬಗಳು ಅವನ ಕೃತಿಗಳಲ್ಲಿ ತುಂಬಿಕೊಂಡಿವೆ, ಟೆರೆನ್ಸ್ ನಿಸ್ಸಂದೇಹವಾಗಿ ಒಬ್ಬ ಕಿರಿಯ ಮಿನಾಂಡರ್, ದಾರ್ಶನಿಕ ಎಪಿಕ್ಯೂರಸ್ಸನ ಸೌಖ್ಯ ತತ್ವದ ಲಘುಮುಖವನ್ನು ಕಲಾವತ್ತಾಗಿ ಪ್ರತಿಪಾದಿಸಿದ ಕೀರ್ತಿ ಮಿನಾಂಡರನದು. ಸಹನೆ ದಯೆ ಸೌಹಾರ್ದ ಸಖ್ಯಶೀಲತೆ ಸುಗಮ್ಯತೆ ಮುಂತಾದ ಸದ್ಗುಣಗಳಿದ್ದರೇ ಒಡಬಾಳು ಸಾಧ್ಯ, ಸಮಾಜಜೀವನ ಸೊಗಸು ಎಂಬುದೇ ಅವನ ಸಂದೇಶದ ಸಾರಾಂಶ, ಆದರ್ಶ ನಡೆನುಡಿ ಅನೇಕರಿಗೆ ಅಸಾಧ್ಯ ; ಚಿತ್ತಚಾಪಲ್ಯಕ್ಕೆ ಈಡಾಗಿ ಅವರು ಹೀನಕೃತ್ಯ ಸುಳ್ಳುವಂಚನೆಗಳಿಗೆ ಬಿದ್ದೇ ಬೀಳುತ್ತಾರೆ. ಅಂಥವರನ್ನು ಕ್ರೌರ್ಯಕ್ಕೂ ದಂಡನೆಗೂ ಗುರಿ ಮಾಡುವುದರ ಬದಲು ಅವರಿಗೆ ಸಹಾನುಭೂತಿಯ ಸೇಚನ ಎರೆದರೆ ಅವರು ತಿದ್ದಿಕೊಳ್ಳುತ್ತಾರೆ, ಅನ್ಯೋನ್ಯ ವಿಶ್ವಾಸ ಕೆಟ್ಟುಹೋಗುವಂತೆ ಭದ್ರಗೊಳಿಸುತ್ತಾರೆ. ಈ ಪಾಠವನ್ನು ಮಿನಾಂಡರನಿಂದ ಕಲಿಯಬಹುದು, ರೋಮನರ ಸಂಸ್ಕ್ರತಿ ಮೊದಮೊದಲು ಹಸಿತನ ಒರಟು ಅವಿನೀತತ್ವ ಇತ್ಯಾದಿ ಪ್ರಾಕೃತ ಗುಣದೋಷದಿಂದ ಕೂಡಿಕೊಂಡಿತ್ತು. ಅದನ್ನು ನಯ ನುಣುಪಾಗಿಸುವ ಕಾರ್ಯಕ್ಕೆ ಹಲವು ತಲೆಮಾರು ಬೇಕಾಯಿತು. ಟೆರೆನ್ಸನ ಕಾಣಿಕೆ ಅಷ್ಟಿಷ್ಟಲ್ಲ. ಹಳೆಯ ಕಟ್ಟುಗ್ರಸಂಪ್ರದಾಯ ತನ್ನ ಅವಧಿಗೆ ಸಲ್ಲದೆಂದೂ ಸಡಿಲತೆಗೂ ಸರಳತೆಗೂ ಸ್ವಾಭಾವಿಕತೆಗೆ ಮನ್ನಣೆ ದೊರಕಬೇಕೆಂದೂ ಅವನ ವಾದ. ಹಾಗೆ ಮಾಡಿದರೆ ಏನೂ ಅಪಾಯವಿಲ್ಲವೆಂದೇ ಅವನ ನಂಬಿಕೆ. ನಯ ನುಣುಪನ್ನು ಕಲಿತದ್ದರಿಂದ ರೋಮನರ ಗಂಡುದರ್ಪವಾಗಲಿ ರಾಗತೀವ್ರತೆಯಾಗಲಿ ಕಡಿಮೆಯಾಗಲಿಲ್ಲ. 

ರಚನಾನೈಪುಣ್ಯವೂ ಕಲೆಗಾರಿಕೆಯೂ ಟೆರೆನ್ಸ್‍ನಲ್ಲಿ ಸಾಕಷ್ಟಿದ್ದುವು. ಅವಕ್ಕಿಂತಲೂ ಹೆಚ್ಚಾಗಿ ಶೈಲಿಯ ಸರ್ವೋತ್ಕ್ರಷ್ಟತೆ ಅವನ ವಿಶೇಷ ಆಕರ್ಷಣೆ, ಶಾಶ್ವತ ಆಕರ್ಷಣೆ. ಅವನ ಶಬ್ದಸಂದೋಹಕ್ಕೆ ಪ್ಲಾಟಸ್ಸನ ಸೃಷ್ಟಿಲಕ್ಷಣವಾಗಲಿ ಹುಲುಸುತನವಾಗಲಿ ಇಲ್ಲ ; ಉರುಬೂ ಆಡಂಬರವೂ ಇಲ್ಲ. ಆದರೆ ಪ್ಲಾಟಸ್ಸನಲ್ಲಿ ಪ್ರಕಟವಾಗುವ ಶೈಲಿಯ ಠಕ್ಕುಗಳೂ ವಿಲಕ್ಷಣತೆಯೂ ಟೆರೆನ್ಸನಿಂದ ಅತಿ ದೂರ. ಪ್ರಾಚೀನ ಗ್ರೀಕರು ಅಟಿಕ್ ಶೈಲಿ ಎಂದು ಬಹುವಾಗಿ ಗೌರವಿಸುತ್ತಿದ್ದ ಭಾಷಾಮರ್ಯಾದೆ ಮೂರು ಗುಣ ಕೂಡಿ ಆದದ್ದು : ಪರಿಶದ್ಧಿ, ಲಾಲಿತ್ಯ, ಅಚ್ಚುಕಟ್ಟು, ಈ ಗುಣಗಳನ್ನು ಟೆರೆನ್ಸ ಎಷ್ಟರಮಟ್ಟಿಗೆ ಸಾಧಿಸಿಕೊಂಡನೆಂದೆರೆ ಅವನ ಕಾಲದ ಗ್ರೀಕ್ ಲೇಖಕರ ಗ್ರೀಕಿನಿಂದ ಸೊಸುತ್ತಿದ್ದ ಅಟಿಕ್ ಕಂಪು ಅವನ ಲ್ಯಾಟಿನ್ನಿನಿಂದ ಸೊಸುತ್ತಿದ್ದ ಅಟಿಕ್ ಕಂಪನ್ನು ಸರಿಗಟ್ಟಲಿಲ್ಲ. ಪ್ಲಾಟಸ್ ಹಲವು ಛಂದೋರೂಪಗಳನ್ನು ಬಳಸಿಕೊಂಡ ; ಟೆರೆನ್ಸಾದರೊ ಮಾತುಗಾರಿಕೆಯ ನುಡಿಗಟ್ಟಿಗೆ ಕ್ರಮ ಔಚಿತ್ಯ ಮೊನೆ ಸೊಬಗು ಸ್ವಾರಸ್ಯಗಳನ್ನು ತಂದುಕೊಡಬಲ್ಲ ಕೆಲವೇ ಕೆಲವು ವಿಧದ ಪಂಕ್ತಿಗಳಿಂದ ತೃಪ್ತಿಹೊಂದಿದ. ಸಂಭಾಷಣೆಗೂ ಕಥನಕ್ಕೂ ಅವು ಒಗ್ಗಿಬಂದುವು. ಅವನಿಂದ ಆರಿಸಿದ ಅನೇಕ ಕಿರುವಾಕ್ಯಗಳೂ ಪದಗುಚ್ಚಗಳೂ ನಾಣ್ಣುಡಿಯಂತೆ ಶತಮಾನಗಟ್ಟಲೆ ಸಂದು ಬಂದಿವೆ; ಸರ್ವಜನಾದರಣೀಯ ಅಭಿಪ್ರಾಯಕ್ಕೂ ರಾಗಭಾವನೆಗೂ ಅವು ಪರಿಷ್ಕಾರವಾಗಿ ಸಮಂಜಸ ; ಒಂದು ಅಕ್ಷರವೂ ಹೆಚ್ಚಿಲ್ಲ ಕಡಿಮೆಯಿಲ್ಲ, ಒಂದು ಅಕ್ಷರವನ್ನೂ ಬದಲಾಯಿಸುವಂತಿಲ್ಲ, ಗ್ರೀಕ್ ಭಾಷೆಗೆ ಅವನು ಋಣಿ ಆದರೆ ಲ್ಯಾಟಿನ್ನನ್ನು ಅದೇ ಮಟ್ಟಕ್ಕೆ ಎತ್ತಿದ್ದರಿಂದ ಋಣಿಯಲ್ಲ. ಟೆರೆನ್ಸನ ಯಶಸ್ಸು ಯೂರೋಪಿನಲ್ಲೆಲ್ಲ ಹರಡಿ ನಿಂತಿದ್ದರಲ್ಲಿ ಅಚ್ಚರಿಯೇನು ಇಲ್ಲ.

ಟೆರೆನ್ಸನ ವಿಮರ್ಶನ ಶಕ್ತಿ ಸಾದಾರಣ ದರ್ಜೆಗೆ ಮೀರಿದ್ದು ಎಂಬುದಕ್ಕೆ ಸಾಕ್ಷ್ಯವಿದೆ. ತನ್ನ ನಾಟಕಗಳಿಗೆ ತಾನೇ ಪೀಠಿಕೆ ಬರೆಯುವುದು ಅವನ ಪದ್ಧತಿಯಾಗಿತ್ತು. ಆ ಪೀಠಿಕೆಗಳು ಮುಖ್ಯಾವಾಗಿ ನಾಟಕಸಾಹಿತ್ಯದ ಸಮರ್ಥನೆಗಾಗಿ ರಚಿತವಾದವು. ಎರಡನೆದಾಗಿ ತನ್ನ ವೈಯಕ್ತಿಕ ರಚನಾವಿಧಾನದ ಸಮರ್ಥನೆಗಾಗಿ ಬರೆದವು. ತನಗಿಂತ ವಯಸ್ಸಿನಲ್ಲಿ ದೊಡ್ಡವನಾದ ಒಬ್ಬ ಕವಿ ತನ್ನನ್ನು ಆತನಿಗೆ ಪ್ರತ್ಯುತ್ತರ ಹೇಳುತ್ತಾನೆ, ಮನವೊಪ್ಪುವಂತೆ. ಮತ್ಸರಿಗನ ಹೆಸರು ಲ್ಯೂಸಿಯಸ್ ಲ್ಯವಿನಿಯಸ್ ಅಥವಾ ಲ್ಯನ್ಯೂವಿನಸ್ ಎಂದು ಪತ್ತಹಚ್ಚಿದ್ದಾರೆ. ಅವನ ಆಪಾದನೆಗಳಲ್ಲಿ ಪ್ರಧಾನವಾದದ್ದು, ಟೆರೆನ್ಸ ಎರಡು ಪ್ರತ್ಯೇಕ ಆಕರಗಳಿಂದ ವಿಷಯಗಳನ್ನು ತೆಗೆದುಕೊಂಡು ಅವನ್ನು ಕಲಬೆರಕೆ ಮಾಡುತ್ತಾನೆ, ಎಂಬುದು, ಟೆರೆನ್ಸನ ಜವಾಬು: ' ಹಿರಿಯ ಕವಿಗಳಾದ ನೀವಿಯಸ್, ಪ್ಲಾಟಸ್, ಎನ್ನಿಯಸ್ ಅದೇ ಪದ್ಧತಿಯನ್ನು ಅನುಸರಿಸಿ ಗೆದ್ದಿದ್ದಾರೆ. ಅವರನ್ನು ನಾನು ಹಿಂಬಾಲಿಸುತ್ತೇನೆ. ನಿನ್ನಂತೆ ಒಂದೇ ನಾಟಕವನ್ನು ಅಕ್ಷರಶಃ ತರ್ಜುಮೆ ಮಾಡುವುದಿಲ್ಲ ನಾನು. ನಿನ್ನ ಕೆಲಸ ಏನು ಗೋತ್ತೆ ? ಒಳ್ಳೆಯ ಗ್ರೀಕ್ ನಾಟಕವನ್ನು ಕೆಟ್ಟ ಲ್ಯಾಟಿನ್ ನಾಟಕವಾಗಿ ಪರಿವರ್ತಿಸುತ್ತಿದ್ದಿಯೆ.' ಲ್ಯವಿನಿಯಸ್ಸನ ಇನ್ನೊಂದು ಆಕ್ಷೇಪಣೆ, ಟೆರೆನ್ಸನ ಗ್ರಂಥಚೌರ್ಯಕ್ಕೆ ಸಂಬಂಧಿಸಿದ್ದು. ನೀವಿಯಸ್ ಪ್ಲಾಟಸ್ಸರಿಂದ ಅಷ್ಟಿಷ್ಟು ಎರವು ಪಡೆದಿರುವುದನ್ನು ಒಪ್ಪಿಕೊಂಡು ಟೆರೆನ್ಸ ಅದನ್ನು ಹೇಗೆ ತಾನು ಸಲಕ್ಷಣವಾಗಿ ತನ್ನದನ್ನೇ ಅಗಿಸಿಕೊಡಿರುವೆನೆಂಬುದನ್ನು ಸ್ಪಷ್ಟಗೊಳಿಸುತ್ತಾನೆ. ಅವರ ಅತಿರೇಕವನ್ನೂ ವಿಕಾರವನ್ನೂ ತಾನು ಕುಗ್ಗಿಸಿ ಹದಗೊಳಿಸಿರುವ ಸಂಗತಿಯನ್ನು ಒತ್ತಿ ಹೇಳುತ್ತಾನೆ. ಸ್ನೇಹಿತರ ನೆರವಿನಿಂದ ನಾಟಕ ಕಟ್ಟುತ್ತಾನೆ ಎಂಬ ದೂಷಣೆಗೆ ಮರುಸವಾಲಾಗಿ, ದೂಷಕ ತನಗೂ ಅಂಥ ಗಣ್ಯ ಮಿತ್ರರು ಇಲ್ಲವಲ್ಲ ಎಂಬ ಹೊಟ್ಟೆಕಿಚ್ಚನ್ನು ತೋಡಿಕೊಳ್ಳುತ್ತಿದ್ದಾನೆ. ಎನ್ನುತ್ತಾನೆ. ಟೆರೆನ್ಸನ ಪೀಠಿಕೆಗಳಿಂದ ಇತರ ಕೆಲವು ಸಂಗತಿಗಳೂ ನಮಗೆ ತಿಳಿಯಬರುತ್ತವೆ. ರೋಮಿನಲ್ಲಿ ಜನಸಾಮಾನ್ಯರಿಗೂ ರಸಿಕವರ್ಗಕ್ಕೂ ಅಂತರ ಹೆಚ್ಚು ಹೆಚ್ಚು ಅಗಲವಾಗುತ್ತಿತ್ತು : ಉತ್ತಮ ಸಾಹಿತ್ಯ ಕಲಾವಂತಿಕೆಯ ಕಡೆಗೆ ಸರಿದು ನಿಜಜೀವನದಿಂದ ದೂರವಾಗುತ್ತ ಬಂದಿತ್ತು-ಇತ್ಯಾದಿ.

ಅನಂತರ ಬಂದ ಸುಪ್ರಸಿದ್ಧ ಲೇಖಕರೆಲ್ಲ ಟೆರನ್ಸಗೆ ವಿಶೇಷ ಗೌರವ ಸಲ್ಲಿಸಿದರು. ಹೊಸಹುಟ್ಟಿನ ಅವಧಿಯಲ್ಲಿ ಆದರ್ಶ ಲ್ಯಾಟಿನ್ನಿನ ಸ್ವಾಮಿಯೆಂದು ಅವನನ್ನು ಕಂಠಪಾಠ ಮಾಡಿಕೊಳ್ಳುತ್ತಿದ್ದರು, 17ನೆಯ ಶತಮಾನದ ಫ್ರಾನ್ಸಿನಲ್ಲಿ ಅವನಿಗೆ ಮೇಲಣ ಸ್ಥಾನವಿತ್ತು. ಈಗಲೂ ಅವನ ಕೀರ್ತಿ ಕುಂದಿಲ್ಲ.								(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ